ಚತುಷ್ಪಾದಿಗಳು

ವರ್ಟಿಬ್ರೇಟ ಉಪವಿಭಾಗದ ಅಧಿವರ್ಗಗಳಲ್ಲೊಂದಾದ ಟೆಟ್ರಾಪೊಡಕ್ಕೆ ಸೇರಿದ ಕಶೇರುಕಗಳು. ಅವಯವಯಗಳನ್ನು (ಕೈಕಾಲು) ಪಡೆದಿರುವುದು ಇವುಗಳ ವಿಶಿಷ್ಟ ಲಕ್ಷಣ. ಈ ಲಕ್ಷಣದಲ್ಲಿ ಇವು ಇನ್ನೊಂದು ಅಧಿವರ್ಗವಾದ ಪಿಸೀಸ್‍ನಿಂದ (ಮೀನುಗಳ ಗುಂಪು) ಭಿನ್ನವೆನಿಸಿವೆ. ಮೀನುಗಳಿಗೆ ಕೈಕಾಲುಗಳ ಬದಲಾಗಿ ಈಜುರೆಕ್ಕೆಗಳಿವೆ. ಅಲ್ಲದೆ ಮೀನುಗಳು ಸಂಪೂರ್ಣವಾಗಿ ಜಲವಾಸಿಗಳಾಗಿದ್ದರೆ ಟೆಟ್ರಾಪೊಡ ಗುಂಪಿಗೆ ಸೇರಿದ ಪ್ರಾಣಿಗಳು ತಮ್ಮ ಜೀವನವನ್ನು ಸಂಪೂರ್ಣವಾಗಿ ಇಲ್ಲವೆ ಭಾಗಶಃ ಭೂಮಿಯ ಮೇಲೆ ಕಳೆಯುತ್ತವೆ. ಟೆಟ್ರಾಪೊಡ ಅಧಿವರ್ಗದಲ್ಲಿ ಉಭಯವಾಜೀವಿ ಆಂಫಿಬಿಯ (ಕಪ್ಪೆ, ಸ್ಯಾಲಮ್ಯಾಂಡರುಗಳು), ರೆಪ್ಟೀಲಿಯ ಸರೀಸೃಪ (ಹಲ್ಲಿ, ಮೊಸಳೆ, ಹಾವು, ಆಮೆ ಇತ್ಯಾದಿ), ಪಕ್ಷಿಗಳು/ಹಕ್ಕಿಗಳು ಏವೀಸ್ (ಹಕ್ಕಿಗಳು) ಮತ್ತು ಮ್ಯಾಮೇಲಿಯ (ಸ್ತನಿಗಳು) ಎಂಬ ನಾಲ್ಕು ವರ್ಗಗಳನ್ನು ಸೇರಿಸಲಾಗಿದೆ. ನಾಲ್ಕು ಕೈಕಾಲುಗಳಿರುವುದೇ ಸಾಮಾನ್ಯವಾದರೂ (ಈ ಪದ ಗ್ರೀಕಿನಿಂದ ಬಂದುದಾಗಿದ್ದು ನಾಲ್ಕು ಪಾದಗಳು ಎಂಬ ಅರ್ಥ ಕೊಡುತ್ತದೆ) ಕೆಲವು ಪ್ರಾಣಿಗಳಲ್ಲಿ ಕೇವಲ ಎರಡೇ ಕಾಲುಗಳಿರಬಹುದು. ಕೆಲವಲ್ಲಿ ಕೈಕಾಲುಗಳೇ ಇರದಿರಬಹುದು (ಹಾವುಗಳು). ಆದರೆ ಇಂಥ ಪ್ರಾಣಿಗಳು ಸಹ ನಾಲ್ಕು ಕಾಲುಗಳುಳ್ಳ ಪೂರ್ವಜಪ್ರಾಣಿಗಳಿಂದ ವಿಕಾಸವಾಗಿವೆ. ಅಲ್ಲದೆ ಕೆಲವು ಪ್ರಾಣಿಗಳಲ್ಲಿ ಕೈಕಾಲುಗಳು ಬೇರೆ ರೀತಿಯ ಅಂಗಗಳಾಗಿ ಮಾರ್ಪಾಡಾಗಿರುವುದಂಟು. ಉದಾಹರಣೆಗೆ, ಹಕ್ಕಿಗಳಲ್ಲಿ ಮುಂದಿನ ಎರಡು ಕಾಲುಗಳು ರೆಕ್ಕೆಗಳಾಗಿ ಮಾರ್ಪಾಡಾಗಿವೆ. ಹಾಗೆಯೇ ತಿಮಿಂಗಿಲಗಳಲ್ಲಿ ಮುಂದಿನ ಕಾಲುಗಳು ಈಜುರೆಕ್ಕೆಗಳಾಗಿ ಬದಲಾಗಿವೆ. ಇದರಿಂದಾಗಿ ವರ್ಟಿಬ್ರೇಟ ಉಪ ವಿಭಾಗವನ್ನು ಟೆಟ್ರಾಪೊಡ ಮತ್ತು ಪಿಸೀಸ್ ಎಂದು ವಿಭಾಗಿಸಿರುವುದು ಅಭ್ಯಾಸದ ಅನುಕೂಲಕ್ಕಾಗಿ ಮಾತ್ರವೇ ವಿನಾ ಇನ್ನಾವುದಕ್ಕೂ ಅಲ್ಲ.
(ಜಿ.ಎಂ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ